ಕಡಬ : ಪೋಲೀಸರಿಂದ ಪೊಲೀಸ್ ಪೇದೆಯೇ ಅರೆಸ್ಟ್...?ಕೆಲಸದಿಂದ ಕೂಡ ಅಮಾನತ್ತು...!

ಕಡಬ : ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ನಿನ್ನೆ ತಡರಾತ್ರಿ ಪೊಲೀಸ್ ಪೇದೆಯೊಬ್ಬ ಮಹಿಳೆಯರು ಮಾತ್ರ ಇದ್ದ ಮನೆಗೆ ಅಕ್ರಮ ಪ್ರವೇಶ ಮಾಡಿ ಹಿಗ್ಗಾ ಮುಗ್ಗಾ ಹೊಡೆತ ತಿಂದ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತು. ಮಹಿಳೆ ಮಾತ್ರ ವಾಸ್ತವ್ಯ ಇದ್ದ ಮನೆಗೆ ನಿನ್ನೆ ರಾತ್ರಿ ವ್ಯಕ್ತಿಯೊಬ್ಬ ಕಳ್ಳನಂತೆ ನುಗ್ಗಲು ಯತ್ನಿಸುವಾಗ ಮನೆಯಲ್ಲಿ ಇದ್ದ ನೆಂಟರು ಗಮನಿಸಿ ಆತನನ್ನು ಹಿಡಿದು ಹಿಗ್ಗಾ ಮುಗ್ಗಾ ಬಾರಿಸಿದ್ದು ಈ ವೇಳೆ ಆತ ತಾನು ಕಡಬ ರಾಜು ಪೊಲೀಸ್ ಅಂತ ಹೇಳಿದ ಬಗ್ಗೆ ಕಡಬದಾದ್ಯಂತ ಗಾಳಿ ಸುದ್ದಿ ಹಬ್ಬಿತ್ತು.
ಸದ್ಯ ಈ ಬಗ್ಗೆ ಪೊಲೀಸರ ಬಳಿ ಕೇಳಿದಾಗ ಸ್ಪಷ್ಟನೆ ಕೊಟ್ಟಿದ್ದು ಕಡಬ, ಕೊಯಿಲ ನಿವಾಸಿ ಬಾಬು ಗೌಡ (53) ಎಂಬವರ ದೂರಿನಂತೆ, ದಿನಾಂಕ: 03.12.2025 ರಂದು ತಡರಾತ್ರಿ ವೇಳೆ, ಪಿರ್ಯಾದುದಾರರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಯಲ್ಲಿ ಜೋರಾಗಿ ಶಬ್ದ ಕೇಳಿದ್ದು, ಬಾಬು ಗೌಡ ಹೋಗಿ ನೋಡಿದಾಗ, ತಮ್ಮನ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಮನೆಯ ಸದಸ್ಯರುಗಳು ಹಿಡಿದುಕೊಂಡಿದ್ದು, 

ಸದ್ರಿ ಅಪರಿಚಿತನು (ರಾಜು ನಾಯ್ಕ್) ತಪ್ಪಿಸಿಕೊಳ್ಳುವ ಉದ್ದೇಶದಿಂದ, ಮನೆಯ ಸದಸ್ಯರ ಪೈಕಿ ಚೇತನ್ ಎಂಬಾತನಿಗೆ ಮೇಲೆ ಕೈಯಿಂದ ಹಲ್ಲೆ ಮಾಡಿರುತ್ತಾನೆ. ಬಾಬು ಗೌಡ ಆತನನ್ನು ಉಳಿದವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ, ಸದ್ರಿ ಅಪರಿಚಿತ ವ್ಯಕ್ತಿಯು ಕಡಬ ಪೊಲೀಸ್ ಠಾಣೆಯ ಹೆಚ್.ಸಿ ರಾಜು ನಾಯ್ಕ ಎಂಬುದಾಗಿ ತಿಳಿದು ಬಂದಿರುತ್ತದೆ.

ರಾಜು ನಾಯ್ಕರವರು ತಡರಾತ್ರಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಸದಸ್ಯರಿಗೆ ಕೈಯಿಂದ ಹಲ್ಲೆ ನಡೆಸಿದ ಬಗ್ಗೆ ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ 86/2025. ಕಲಂ: ಕಲಂ-329(3), 115(2), 331(6) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ಸದ್ಯ ಹೆಚ್.ಸಿ ರಾಜು ನಾಯ್ಕ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ತಕ್ಷಣ ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿರುತ್ತದೆ ಎಂದು ತಿಳಿಸಿದಿದ್ದಾರೆ.

0 ಕಾಮೆಂಟ್‌ಗಳು