ಮಂಗಳೂರು :ಅ,9,ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಗರ ಪಂಚಮಿಯನ್ನು ಶುಕ್ರವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.
ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡು ಬರುವ ನಾಗರಕಟ್ಟೆಗಳು ಹಾಗೂ ನಾಗದೇವರ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆನೇ ಸರತಿ ಸಾಲಿನಲ್ಲಿ ನಿಂತು ಶ್ರೀದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿದರು.
ವಿಶೇಷವಾಗಿ ನಾಗದೇವನಿಗೆ ಪ್ರಿಯವಾದ ಕ್ಷೀರಾಭಿಷೇಕ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಜಿಲ್ಲೆಯಲ್ಲಿ ನಾಗದೇವರನ್ನು ಭಾರೀ ಭಕ್ತಿ ಭಾವದೊಂದಿಗೆ ಪೂಜಿಸಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಳ್ಯ ಪುತ್ತೂರು ತಾಲೂಕಿನ ಇಂತಹ ಹಲವಾರು ದೇವಾಲಯಗಳಲ್ಲಿ ಜನಜಂಗುಳಿಯಿತ್ತು.
ನಗರದ ವಿವಿಧೆಡೆ ಬೆಳಿಗ್ಗೆಯಿಂದ ಭಕ್ತರು ನಾಗದೇವರಿಗೆ ಹಾಲಿನ ಅಭಿಷೇಕ ಮಾಡುವಲ್ಲಿ ನಿರತರಾಗಿದ್ದರು.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಪಂಚಮಿ ಪ್ರಯುಕ್ತ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ದೇಶದಲ್ಲಿಯೇ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಾರಾಧನೆಗೆ ಪುಣ್ಯ ಕ್ಷೇತ್ರವಾಗಿದ್ದು, ನಾಗರ ಪಂಚಮಿ ದಿನವಾದ ಮಂಗಳವಾರ ಸಾವಿರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಳಿಗ್ಗೆಯಿಂದ ರಾತ್ರಿ 8.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಾಭರಣ ಸೇವೆ, ನಾಗ ಮಂತ್ರಾಭಿಷೇಕ, ರುದ್ರಾಭಿಷೇಕ ಇತ್ಯಾದಿ ಸೇವೆಗಳು ನಡೆದವು.
ನಾಗರಪಂಚಮಿಯಂದು ವಿವಿದ ಕುಟುಂಬಗಳಿಂದಲೂ ತಂಬಿಲ ಸೇವೆಯ ವಿಶೇಷ ಪೂಜೆ, ಅಭಿಷೇಕ ಕಾರ್ಯ ಭಕ್ತರಿಂದ ನಡೆಯುತ್ತದೆ. ವಿಶೇಷವಾಗಿ ಭಕ್ತರು ಹರಕೆ ಹಾಗೂ ಭಕ್ತಿಪೂರ್ವಕವಾಗಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳವಾದ ‘ನಾಗಬನ’ವು ಇಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.
0 ಕಾಮೆಂಟ್‌ಗಳು