ಸುಬ್ರಹ್ಮಣ್ಯ/ಕಡಬ: ಅದು ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿಯಾಗಿದೆ. ಹೌದು, ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದ ‘’ಬಸವನಮೂಲ’’ ಎಂದೇ ಪ್ರಸಿದ್ಧಿಯಾಗಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಅತಿ ಪ್ರಿಯ ಎನ್ನಲಾದ ಸಾಮೂಹಿಕ ಅತಿರುದ್ರ ಮಹಾಯಾಗ ನಡೆಸಲು ನಿಶ್ಚಯಿಸಲಾಗಿದೆ.
ತಾರಕಾಸುರನ ವಧೆಗಾಗಿ ಸುಬ್ರಹ್ಮಣ್ಯ ಸ್ವಾಮಿ ಮಹಾದೇವನ ಕುರಿತು ತಪಸ್ಸು ಮಾಡಿದಾಗ, ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳ ಇದು ಎನ್ನುವುದು ಇಲ್ಲಿನ ಐತಿಹ್ಯ. ಅರಣ್ಯ ಮಧ್ಯದ ಇಂತಹ ಅದ್ಭುತ ಪ್ರದೇಶದಲ್ಲಿ ಲೋಕಕಲ್ಯಾಣ ಸಲುವಾಗಿ ವಿಶೇಷ ರೀತಿಯ ಅತಿರುದ್ರ ಯಾಗ ನಡೆಸಲು ಭಗವದ್ಬಕ್ತರು ಸೇರಿ ಸಂಕಲ್ಪಿಸಿದ್ದಾರೆ. ಲಕ್ಷಕ್ಕೂ ಹೆಚ್ಚು ಮಂದಿ ಸಂಕಲ್ಪದ ಮೂಲಕ ಅತಿರುದ್ರ ಮಹಾಯಾಗ ನಡೆಸಬೇಕೆಂದು ನಿಶ್ಚಯಿಸಿದ್ದು, ಇದಕ್ಕಾಗಿ ಸಾಮೂಹಿಕ ಸಹಭಾಗಿತ್ವಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ.

ಆರಂಭಿಕವಾಗಿ ಯಾಗ ನೋಂದಣಿ ನೆರವೇರಿಸುವ 14,641 ಭಕ್ತರ ಹೆಸರಲ್ಲಿ ಇದೇ ಮೇ 6ರಂದು ಬಸವನಮೂಲ ಬಸವೇಶ್ವರ ಕ್ಷೇತ್ರದಲ್ಲಿ ಯಾಗ ಸಂಕಲ್ಪ ನೆರವೇರಲಿದ್ದು, ಅಷ್ಟೂ ಮಂದಿ ಇಚ್ಛಿಸಿದಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಸಂಕಲ್ಪ ಕೈಗೊಳ್ಳಲು ಅವಕಾಶ ಮಾಡಲಾಗಿದೆ. ಅತಿರುದ್ರ ಯಾಗ ನಡೆಸುವುದಕ್ಕೂ ಮುನ್ನ ಮಹಾರುದ್ರ ಯಾಗವನ್ನು ಇದೇ ಕಾರ್ತಿಕ ಮಾಸದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಅತಿರುದ್ರ ಮಹಾಯಾಗ ಅತ್ಯಂತ ಅಪರೂಪದ ಕೈಂಕರ್ಯವಾಗಿದ್ದು, ಯಾಗಕ್ಕೆ ನೋಂದಾಯಿಸಿದ ಭಕ್ತರ ಹೆಸರಲ್ಲಿ ಬೆಳಗ್ಗೆ ಎಂಟು ಗಂಟೆಗೆ ಸಂಕಲ್ಪ ನೆರವೇರಲಿದೆ. ಇದನ್ನು ಯೂಟ್ಯೂಬ್ ಲೈವ್ ಮುಖಾಂತರ ಪ್ರತಿಯೊಬ್ಬರಿಗೂ ನೋಡುವ ವ್ಯವಸ್ಥೆ ಮಾಡಲಾಗಿದೆ. ದೂರದ ಊರಿನಲ್ಲಿ ಇರುವ ಭಕ್ತರೂ ಈ ಸೇವೆ ಮಾಡಬಹುದಾಗಿದ್ದು, ಆನ್ಲೈನಲ್ಲಿ ನೋಂದಣಿ ಮಾಡಿದವರಿಗೆ ಯಾಗದ ಪ್ರಸಾದರೂಪವಾಗಿ ರುದ್ರಾಕ್ಷಿ, ರಕ್ಷೆ ಮತ್ತು ಭಸ್ಮವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು. ಶಿವನ ಪ್ರೀತ್ಯರ್ಥ ಮೊದಲ ಬಾರಿಗೆ ಅತಿರುದ್ರ ಮಹಾಯಾಗ ನೆರವೇರಲಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವ್ಯವಸ್ಥೆ ಮಾಡಲಾಗುತ್ತಿದೆ.

0 ಕಾಮೆಂಟ್‌ಗಳು